ಫ್ರಾಂಕ್‍ಲಿನ್, ಬೆಂಜಮಿನ್
	1706-90. ಅಮೇರಿಕದ ಪ್ರಸಿದ್ಧ ಮುದ್ರಕ, ಪ್ರಕಾಶನ ಲೇಖಕ, ಸಂಶೋಧಕ, ವಿಜ್ಞಾನಿ ಮತ್ತು ಚತುರ ರಾಜಕಾರಣಿ. 1706 ಜನವರಿ 17ರಂದು ಜನನ. ಇವನ ತಂದೆ ಬಾಸ್ಟನ್ ನಗರದ ಸಾಬೂನು ಮತ್ತು ಮೇಣದ ಬತ್ತಿ ತಯಾರಕ. ಫ್ರಾಂಕ್‍ಲಿನ್ ಹತ್ತನೆಯ ವಯಸ್ಸಿನ ತನಕ ವಿದ್ಯಾಭ್ಯಾಸಮಾಡಿ, ಮುಂದೆ ಹನ್ನೆರಡನೆಯ ವಯಸ್ಸಿನಲ್ಲಿ ಮುದ್ರಣಾಲಯ ಸೇರಿ ಮೊದಲು ಫಿಲಡೆಲ್ಫಿಯ ಅನಂತರ ಲಂಡನ್ ನಗರಗಳಲ್ಲಿ ಕೆಲಸ ಮಾಡಿದ. 1729ರಲ್ಲಿ ಪೆನ್ಸಿಲ್ವೇನಿಯ ಮತ್ತು ಕೆಲವು ವಸಾಹತುಗಳ ನೋಟುಗಳ ಮುದ್ರಕನಾಗಿ ನಿಯಮಿತನಾದ. ಮುದ್ರಣ ಮತ್ತು ಪ್ರಕಾಶನ ಕಾರ್ಯಗಳಲ್ಲಿ ಸಾಕಷ್ಟು ಅನುಭವ ಪಡೆದ ಬಳಿಕ ಫ್ರಾಂಕ್‍ಲಿನ್ ಪತ್ರಿಕೋದ್ಯಮಕ್ಕೆ ಇಳಿದು ಪೆನ್ಸಿಲ್ವೇನಿಯ ಗೆಜೆಟ್ ಮತ್ತು ಪೂರ್ ರಿಚಡ್ರ್ಸ ಆಲ್ಮನಾಕ್ ಪತ್ರಿಕೆಗಳನ್ನು ಪ್ರಾರಂಭಿಸಿ ಜನಪ್ರಿಯಗೊಳಿಸಿದ ಮಿತವ್ಯಯ, ಶ್ರಮಜೀವನ, ಸ್ವಯಂ ಪರಿಪೂರ್ಣತೆ ಮೊದಲಾದ ವಿಷಯಗಳನ್ನು ಪತ್ರಿಕೆಗಳಲ್ಲಿ ಸಾಮಾನ್ಯರಿಗೂ ಅರ್ಥವಾಗುವಂತೆ ಬರೆದ ಪತ್ರಿಕೋದ್ಯಮಕ್ಕೆ ಜೀವ ತುಂಬಿದ ಬೆಂಜಮಿನ್ ಫ್ರಾಂಕ್‍ಲಿನ್ ಬಹುಮುಖ ಪ್ರತಿಭೆಯ ವ್ಯಕ್ತಿ, ವಿಜ್ಞಾನ, ತಂತ್ರವಿದೈಯಲ್ಲೂ ಇವನಿಗೆ ಬಹಳ ಆಸಕ್ತಿ. ವಿದ್ಯುತ್ ಮತ್ತು ಸಿಡಿಲಿಗೆ ಇರುವ ಸಂಬಂಧ ಕುರಿತು ಸಂಶೋಧನೆ ನಡೆಸಿದ. ಗಲ್ಫ್ ಪ್ರವಾಹ ಉತ್ತರ ಅಮೇರಿಕದ ಮೇಲೆ ಬೀರುವ ಪರಿಣಾಮ ಮೊದಲಾದ ವಿಷಯಗಳನ್ನು ಅಧ್ಯಯನ ಮಾಡಿದ.

	ಕಾಲಕ್ರಮದಲ್ಲಿ ಪ್ರಾಂಕ್‍ಲಿನ್ ಸಂಶೋಧನೆಯಿಂದ ಸಕ್ರಿಯರಾಜಕೀಯಕ್ಕೆ ಪ್ರವೇಶಿಸಿದ. ಇವನ ಸ್ವಂತ ಪ್ರಾಂತ್ಯವಾದ ಪೆನ್ಸಿಲ್ವೇನಿಯದಲ್ಲಿ ನಾನಾ ಬಗೆಯ ಸೇವಾ ಕಾರ್ಯಗಳಲ್ಲಿ ನಿರತನಾದ. ಫಿಲಡೆಲ್ಫಿಯದ ಅಂಚೆ ಇಲಾಖೆಯ ಮುಖ್ಯಸ್ಥನಾಗಿ ಸೇವೆ ಸಲ್ಲಿಸಿದ. 1751ರಿಂದ 1764ರ ತನಕ ಶಾಸಕಾಂಗದ ಸದಸ್ಯನಾದ. ಅದು ಅಮೆರಿಕದಲ್ಲಿ ಕ್ರಾಂತಿಯ ಗಾಳಿ ಬೀಸ ತೊಡಗಿದ್ದ ಕಾಲ. ವಸಾಹತುಗಳು ಒಂದಾಗಿ ಸೇರಬೇಕೆಂಬ ಸಲಹೆಯನ್ನು ಫ್ರಾಂಕ್‍ಲಿನ್ 1754ರಲ್ಲಿ ಮಂಡಿಸಿದ್ದ. ತನ್ನ ಪ್ರಾಂತ್ಯದ ಕೆಲವು ಸಮಸ್ಯೆಗಳ ಬಗ್ಗೆ ಮಾತುಕತೆ ನಡೆಸಲು ಇವನು ಇಂಗ್ಲೆಂಡಿಗೆ ಹೋಗಿ ಮರಳಿದ. 1775ರಲ್ಲಿ ಇವನು ಸ್ಟಾಂಪ್ ಮಸೂದೆಯನ್ನು ವಿರೋಧಿಸಲು ಇಂಗ್ಲೆಂಡಿಗೆ ಹೋಗಿ ಅಲ್ಲಿ ವಸಾಹತುಗಳ ನಿಲುವನ್ನು ಸ್ಟಷ್ಟೀಕರಿಸಿದ.

	ಅಮೆರಿಕದ ಕ್ರಾಂತಿಯಲ್ಲಿ ವಸಾಹತುಗಳು ಪ್ರಕಟಿಸಿದ ಸ್ವಾತಂತ್ರ ಘೋಷಣೆ ರಚಿಸುವುದರಲ್ಲಿ ಪ್ರಮುಖ ಪಾತ್ರವಹಿಸಿದ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಇವನ ಪಾತ್ರ ಮಹತ್ತರವಾದುದಾಗಿತ್ತು. ಅಮೇರಿಕದ ಪ್ರತಿನಿಧಿಯಾಗಿ ಇವನು ಯೂರೋಪಿಗೆ ಹೋಗಿ ಕ್ರಾಂತಿಗೆ ಅಲ್ಲಿಯ ರಾಷ್ಟ್ರಗಳ ಬೆಂಬಲ ಪಡೆಯಲು ಪ್ರಯತ್ನಿಸಿದ. 1776ರಲ್ಲಿ ಫ್ರಾನ್ಸಿಗೆ ಹೋಗಿ ಅಮೇರಿಕದ ವಸಾಹತುಗಳಿಗೆ ಸೈನಿಕ ಮತ್ತು ಆರ್ಥಿಕ ನೆರವು ಗಳಿಸಲು ಶ್ರಮಿಸಿದ. 1778ರಲ್ಲಿ ಫ್ರಾನ್ಸ್ ಇವನನ್ನು ಅಮೆರಿಕದ ರಾಯಭಾರಿ ಎಂದು ಅಂಗೀಕರಿಸಿತು. ಮುಂದೆ ವಸಾಹತುಗಳು ಫ್ರಾನ್ಸಿನೊಂದಿಗೆ ಸಂಧಿಮಾಡಿಕೊಳ್ಳಲು ಫ್ರಾಂಕ್‍ಲಿನ್ನನ ರಾಯಭಾರವೇ ಕಾರಣವಾಯಿತು. ಅಮೆರಿಕದ ವಸಾಹತುಗಳ ಪರವಾಗಿ ಫ್ರಾನ್ಸ್ ಯುದ್ಧದಲ್ಲಿ ಭಾಗವಹಿಸುವಂತೆ ಮಾಡುವುದರಲ್ಲಿ ಫ್ರಾಂಕ್‍ಲಿನ್ನನ ಪಾತ್ರ ಮುಖ್ಯವಾದುದು. ಮುಂದೆ ಅಮೆರಿಕ ಸಂಯುಕ್ತ ಸಂಸ್ಥಾನಗಳ ರಾಜ್ಯಾಂಗವನ್ನು ರಚಿಸಿದ ಪ್ರಮುಖರಲ್ಲಿ ಈತ ಒಬ್ಬನಾಗಿದ್ದ.

	ಸಾಹಿತ್ಯಕ್ಷೇತ್ರದಲ್ಲಿ ಇವನ ಸಾಧನೆ ಗಣನೀಯವಾದುದು. ಇವನ ಆತ್ಮಚರಿತ್ರೆ ಬಹುಜನಪ್ರಿಯ ಕೃತಿಯೆಂದು ಪರಿಗಣಿಸಲ್ಪಟ್ಟಿದೆ. ಪತ್ರಿಕೆಗಳಲ್ಲಿ ಇವನು ಬರೆದ ಲೇಖನಗಳು ವಸಾಹತುಗಳ ಜನರ ಮೇಲೆ ಮಹತ್ತರ ಪ್ರಭಾವ ಬೀರಿದುವು. ಇವನ ಕೆಲವು, ಮಾತುಗಳು ನಾಣ್ಣುಡಿಗಳಾಗಿ ಇಂದಿಗೂ ಅಮರವಾಗಿವೆ. ಅವನ ಹಾಸ್ಯದಲ್ಲಿ ಅಮೆರಿಕದ ವಿಶಿಷ್ಟಗುಣ ಲಕ್ಷಣಗಳನ್ನು ಕಾಣಬಹುದು. ವಿಜ್ಞಾನದ ಬೆಳವಣಿಗೆಯನ್ನು ವರ್ತಮಾನದ ಅಗತ್ಯಗಳಿಗೆ ಅಳವಡಿಸಿದ್ದು ಇವನ ಮುಖ್ಯ ಸಾಧನೆ. ಇವನ ಸಾಧನೆ ಸಿದ್ಧಿಗಳಿಂದಾಗಿ ಫ್ರಾಂಕ್‍ಲಿನ್ ಅಮೆರಿಕದ ನಿರ್ಮಾತೃಗಳಾದ ವಾಷಿಂಗ್‍ಟನ್, ಹ್ಯಾಮಿಲ್ಟನ್, ಜೆಫರ್ಸನ್, ಮೆಡಿಸನ್ ಇವರ ಸಾಲನಲ್ಲಿ ನಿಲ್ಲುತ್ತಾನೆ, 1790 ಏಪ್ರಿಲ್ 17 ರಂದು ಫಿಲಡೆಲ್ಫಿಯದಲ್ಲಿ ಗತಿಸಿದ.		(ಎಂ.ವಿ.ಎಸ್.ಆರ್.)

	ವಿಜ್ಞಾನ ಸಾಧನೆ: ಹದಿನೆಂಟನೆಯ ಶತಮಾನದ ವಸಾಹತು ದಿನಗಳಂದು ಐರೋಪ್ಯ ರಾಷ್ಟ್ರಗಳಲ್ಲಿ ಖ್ಯಾತಿವೇತ್ತನಾಗಿದ್ದ ಏಕೈಕ ಅಮೆರಿಕನ್ ಎಂದರೆ ಬೆಂಜಮಿನ್ ಫ್ರಾಂಕ್‍ಲಿನ್. ಅಂದು ಇವನು ಅಮೆರಿಕನರಿಗೆ ರಾಷ್ಟ್ರಪಿತರ ಪೈಕಿ ಒಬ್ಬನೆಂದು ಮಾನ್ಯನಾಗಿದ್ದರೆ ಯೂರೋಪಿಯನ್ನರಿಗೆ ಶ್ರೇಷ್ಠ ನೈಸರ್ಗಿಕ ವಿಜ್ಞಾನಿಯೆಂದು ಗಣ್ಯನಾಗಿದ್ದ.

	ಸ್ಥಿರ ವಿದ್ಯುತ್ತು (ಸ್ಟ್ಯಾಟಿಕ್ ಎಲೆಕ್ಟ್ರಿಸಿಟಿ) ಅಂದಿನ ಪ್ರಧಾನಾಸಕ್ತಿ. ಶಿಲಾರಾಳದ ಇಲ್ಲವೇ ಪ್ಲಾಸ್ಟಿಕಿನ ಸರಳನ್ನು ಉಣ್ಣೆ ಬಟ್ಟೆಯಿಂದ ಉಜ್ಜಿದಾಗ ಅದರ ಕೊನೆ ಕಾಗದದ ತುಣುಕು ಮುಂತಾದ ಹಗುರ ಪದಾರ್ಥಗಳನ್ನು ಆಕರ್ಷಿಸುವ ಗುಣ ಗಳಿಸುವುದೆಂಬ ಸಂಗತಿ ಪ್ರಾಚೀನ ಕಾಲದಿಂದಲೂ ಗೊತ್ತ್ತಿತ್ತು. ಇದು ಆ ಸರಳನಲ್ಲಿ ಸಂಚಿತವಾದ ಸ್ಥಿರವಿದ್ಯುತ್ತಿನ ಪರಿಣಾಮವೆಂಬ ವಿವರಣೆ ಫ್ರಾಂಕ್‍ಲಿನ್ನನ ಕಾಲಕ್ಕೆ ಒದಗಿತ್ತು.

	ಇಸವಿ 1745. ಪಶ್ಚಿಮ ನೆದರ್ಲೆಂಡ್ಸಿನಲ್ಲಿರುವ ಲೀಡನ್ ವಿಶ್ವವಿದ್ಯಾಲಯದಲ್ಲಿ ಸ್ಥಿರವಿದ್ಯುತ್ತನ್ನು ಕುರಿತ ವಿನೂತನ ಪ್ರಯೋಗವೊಂದನ್ನು ರೂಪಿಸಲಾಯಿತು. ವಿದ್ಯುದ್ವಿಜ್ಞಾನದ ಅಭಿವರ್ಧನೆಯಲ್ಲಿ ಇದೊಂದು ಮೈಲುಗಲ್ಲು. ತರುವಾಯದ ವರ್ಷಗಳಲ್ಲಿ ಇದು ಲೀಡನ್‍ಜಾಡಿ ಪ್ರಯೋಗವೆಂದು ಪ್ರಸಿದ್ಧಿಗಳಿಸಿತು. ಒಳ ಮೈಗೆ ಅಸ್ತರಿ ಹೊದೆಸಿದ ಗಾಜಿನ ಜಾಡಿ, ಬಾಯಿಗೆ ಕಾರ್ಕ್‍ಹಾಕಿ ಇದನ್ನು ನಡುವಿನಲ್ಲಿ ಕೊರೆದು ಜಾಡಿಯ ಒಳಕ್ಕೆ ತೂರುವಂತೆ ಲಗತ್ತಿಸಿದ ಲೋಹದ ಸರಳು. ಪಕ್ಕದಲ್ಲೇ ಹೊಂದಿಸಿದ್ದ ವಿಶಿಷ್ಟ ಸಲಕರಣೆಯಲ್ಲಿ ಘರ್ಷಣೆಯಿಂದ ಉತ್ಪಾದಿಸಿದ ವಿದ್ಯುತ್ತನ್ನು ಜಾಡಿಗೆ ಊಡಿದಾಗ ಇದರಲ್ಲಿ ಅದು ಸ್ಥಿರವಿದ್ಯುತ್ತಾಗಿ ಸಂಗ್ರಹವಾಗುತ್ತಿತ್ತು. ಸರಳಿನ ಹತ್ತಿರಕ್ಕೆ ಕೈ ತಂದಾಗ ಈ ವಿದ್ಯುತ್ತು ವಿಸರ್ಜನೆಗೊಳ್ಳುತ್ತಿತ್ತು. ಸಂಚಿತ ವಿದ್ಯುತ್ತು ಅಧಿಕ ಮೊತ್ತದ್ದಾಗಿದ್ದಾಗ ಕೈಗೆ ಬಿರುಸಾದ ಆಘಾತ ಕೂಡ ಬಡಿಯುವುದಿತ್ತು. ಜಾಡಿಯನ್ನು ಲೋಹ ಪದಾರ್ಥದ ಸನಿಹಕ್ಕೆ ಒಯ್ದಾಗ ವಾಯು ತೆರಪಿನ ಅಡ್ಡ ಪುಟ್ಟ ಕಿಡಿ ಲಟಪಟನೆ ಸಿಡಿಯುತ್ತಿತ್ತು.

	ವಿದ್ಯುತ್ತಿನ ಬಗ್ಗೆ ಸ್ವಂತಪ್ರಯೋಗಗಳಲ್ಲಿ ನಿರತನಾಗಿದ್ದ ಫ್ರಾಂಕ್‍ಲಿನ್ ಸಹಜವಾಗಿ ಲೀಡನ್ ಜಾಡಿ ಪ್ರಯೋಗದಿಂದ ಆಕರ್ಷಿತನಾದ. ವಾಯುವಿನ ಮೂಲಕ ಸದ್ದು ಮಾಡುತ್ತ ಕಿಡಿ ಸಿಡಿಯುವ ವಿದ್ಯಮಾನ ವಾಮನರೂಪದ ಸಿಡಿಲು ಗುಡುಗು ಆಗಿರಬಹುದೇ ಎಂದು ಸಂದೇಹಿಸಿದ. ಅರ್ಥಾತ್ ಇದೇ ವಿದ್ಯಮಾನವನ್ನು ತ್ರಿವಿಕ್ರಮರೂಪಕ್ಕೆ ಲಂಬಿಸಿದಾಗ ಪ್ರಕೃತಿಯಲ್ಲಿ ಕಾಣುವ ಮಿಂಚಿನ ಬೆಳಕು ಮತ್ತು ಗುಡುಗಿನ ಮೊಳಗು ತಲೆದೋರುವುವೆಂದು ಭಾವಿಸಬಹುದೇ ಇದು ನಿಜವೆಂದಾದರೆ ಸಿಡಿಲು ಗುಡುಗು ನೈಸರ್ಗಿಕ ಲೀಡನ್ ಜಾಡಿ ವಿದ್ಯಮಾನವೆಂದು ವೇದ್ಯವಾಗುತ್ತದೆ. ಅಂತರಿಕ್ಷದಲ್ಲಿ ಜರಗುವ ಈ ವಿದ್ಯುತ್ಕ್ರಿಯೆಯಲ್ಲಿ ಭೂಮಿಯೂ ಗಗನವೂ ಅರ್ಧಗಳಲ್ಲಿ ಬೆಸೆದುಕೊಂಡು ಬೃಹತ್ ಲೀಡನ್ ಜಾಡಿ ಆಗಿದ್ದರೆ ಮಾತ್ರ ಇದು ಸಾಧ್ಯ.

	ಈ ಊಹೆಯನ್ನು ಪ್ರತ್ಯಕ್ಷದ ನಿಕಷಕ್ಕೆ ತೀಡುವುದು ಹೇಗೆ? ಇಸವಿ 1752. ಮಳೆಮೋಡ ದಟ್ಟವಾಗಿ ಹೆಪ್ಪುಗಟ್ಟಿದೆ. ಸಿಡಿಲಿನ ಛಳಕು ಗುಡುಗಿನ ಮೊಳಗು ವಿಜೃಂಭಿಸುತ್ತಿವೆ. ಫ್ರಾಂಕ್‍ಲಿನ್ ಗಾಳಿಪಟ ಹಾರಿಬಿಟ್ಟಿದ್ದಾನೆ ಪಟಕ್ಕೆ ಲೋಹದ ತುಣುಕನ್ನು ಲಗತ್ತಿಸಿದ್ದಾನೆ. ರೇಷ್ಮೆದಾರ ಪಟಕ್ಕೂ ನೆಲಕ್ಕೂ ನಡುವೆ ಸಂಪರ್ಕ ಸೇತುವೆ ಆಗಿದೆ. ಇಲ್ಲಿಯ ತರ್ಕವಿದು: ಲೀಡನ್ ಜಾಡಿಯಲ್ಲಿ ಸ್ಥಿರ ವಿದ್ಯುತ್ತು ವಾಯು ತೆರಪಿನ ಮೂಲಕ ನೆಗೆಯುವಾಗ ಕಿಡಿ ಸಿಡಿದಂತೆ ಮೋಡದಲ್ಲಿಯೂ ಸಂಭವಿಸುವುದಾದ ಪಕ್ಷ ಆ ಸ್ಥಿರವಿದ್ಯುತ್ತು ಪಟದಲ್ಲಿರುವ ಲೋಹತುಣುಕಿನ ಮೂಲಕ ಹರಿದು ರೇಷ್ಮೆದಾರ ತಲುಪಿ ನೆಲದಲ್ಲಿರುವ ಸಾಧನವನ್ನು ವಿದ್ಯುದೀಕರಿಸಬೇಕು, ಅಂತೆಯೇ ದಾರವನ್ನು ಸ್ಪರ್ಶಿಸಿದವನ ಕೈಗೆ ವಿದ್ಯುದಾಘಾತ ಬಡಿಯಬೇಕು.

	ಫ್ರಾಂಕ್‍ಲಿನ್ನನ ಪ್ರಯೋಗ ಪವಾಡಸದೃಶವಾಗಿ ಯಶಸ್ಸುಗಳಿಸಿತು. ಮೋಡದಿಂದ ಹರಿದು ಬಂದ ವಿದ್ಯುತ್ತು ಲೀಡನ್ ಜಾಡಿಯಲ್ಲಿಯಂತೆ ಕಿಡಿಗಳನ್ನು ಉದುರಿಸಿತು. ಆತ ಈ ಪ್ರಯೋಗದಲ್ಲಿ ಸಾಯದಿದ್ದುದು ಅದೃಷ್ಟದ ಆಕಸ್ಮಿಕ. ಏಕೆಂದರೆ ಇದೇ ಪ್ರಯೋಗವನ್ನು ತದನಂತರ ಪುನರಾವರ್ತಿಸಿದ ಇಬ್ಬರು ತರುಣರು ವಿದ್ಯುದಾಘಾತದಿಂದ ಕ್ಷಣ ಮರಣಕ್ಕೊಳಗಾದರು. ಫ್ರಾಂಕ್‍ಲಿನ್ನನ ಗಾಳಿಪಟ ಪ್ರಯೋಗ ವಿಜ್ಞಾನ ಪ್ರಪಂಚವನ್ನು ವಿದ್ಯುದೀಕರಿಸಿತು. ಇಂಗ್ಲೆಂಡಿನ ಪ್ರತಿಷ್ಠಿತ ರಾಯಲ್ ಸೊಸೈಟಿಯ ಸದಸ್ಯತ್ವ ಈ ಕಾರಣದಿಂದ ಅವನಿಗೆ ದೊರೆಯಿತು.

	ಇಂದು ಉನ್ನತ ಸೌಧಗಳಲ್ಲಿ ಕಂಡುಬರುವ ಅಶನಿನಿವಾರಕಗಳು (ಎತ್ತರದ ಬಿಂದುವಿನಲ್ಲಿ ಬಾವಿಗೆ ತೆರೆದುಕೊಂಡಿರುವ ಲೋಹದ ಮೊನಚು ಮೂತಿ ಮತ್ತು ಅದರಿಂದ ನೆಲದವರೆಗೆ ಜೋಡಿಸಿರುವ ಲೋಹ ತಂತಿ) ಫ್ರಾಂಕ್‍ಲಿನ್ನನ ಪ್ರಯೋಗದ ನೇರ ಫಲ. ಸಿಡಿಲು ಹೊಡೆದರೆ ಅಶನಿನಿವಾರಕ ಕಟ್ಟಡಕ್ಕೆ ರಕ್ಷಣೆ ಒದಗಿಸುತ್ತದೆ.

	ಶಿಲಾರಾಳದ ಎರಡು ಸರಳುಗಳನ್ನೂ ಗಾಜಿನ ಎರಡು ಸರಳುಗಳನ್ನೂ ತೆಗೆದುಕೊಂಡು ಎಲ್ಲವನ್ನೂ ಉಣ್ಣೆಯ ವಸ್ತ್ರದಿಂದ ಮಾಲೀಸು ಮಾಡಬೇಕು. ಆಗ ಅವು ವಿದ್ಯುದೀಕರಿಸಲ್ಪಡುತ್ತವೆ. ಶಿಲಾರಾಳದ, ಅಂತೆಯೇ ಗಾಜಿನ ಸರಳುಗಳನ್ನು ಒಂದರ ಸನಿಹಕ್ಕೆ ಇನ್ನೊಂದನ್ನು ತಂದಾಗ ಕಾಂತಗಳ ಸಜಾತೀಯ ಧ್ರುವಗಳಂತೆ ಅವು ವಿಕರ್ಷಿಸುತ್ತವೆ. ಬದಲಾಗಿ ಶಿಲಾರಾಳದ ಮತ್ತು ಗಾಜಿನ ಸರಳುಗಳನ್ನು ಹೀಗೆ ತಂದಾಗ, ಕಾಂತಗಳ ವಿಜಾತೀಯ ಧ್ರುವಗಳಂತೆ, ಅವು ಆಕರ್ಷಿಸುತ್ತವೆ. ಈ ವಿಕರ್ಷಣೆ-ಆಕರ್ಷಣೆ ಗುಣಗಳನ್ನು ಗಮನಿಸಿದ ಫ್ರಾಂಕ್‍ಲಿನ್ ವಿದ್ಯುತ್ತು ಎಂಬುದು ಒಂದು ತರಲ (ಫ್ಲೂಯಿಡ್), ಅದು ಒಂದು ವಸ್ತುವಿನಲ್ಲಿ ಅಧಿಕವಾಗಿರಬಹುದು, ಇನ್ನೊಂದರಲ್ಲಿ ನ್ಯೂನವಾಗಿರಬಹುದು ಅಧಿಕ ಸಂಚಿತ ವಸ್ತುಗಳು ಅಂತೆಯೇ ನ್ಯೂನ ಸಂಚಿತವಸ್ತುಗಳು ಪರಸ್ಪರ ವಿಕರ್ಷಿಸುತ್ತವೆ, ಬದಲಾಗಿ ಅಧಿಕ ಸಂಚಿತ ಮತ್ತು ನ್ಯೂನ ಸಂಚಿತ ವಸ್ತುಗಳು ಪರಸ್ಪರ ಆಕರ್ಷಿಸುತ್ತವೆ ಎಂದು ಹೇಳಿ ಈ ಕೊನೆಯ—ಅಂದರೆ ಆಕರ್ಷಣ—ವಿದ್ಯಮಾನದಲ್ಲಿ ಅಧಿಕ ವಿದ್ಯುತ್ತು ನ್ಯೂನ ವಿದ್ಯುತ್ತಿಗೆ ಹರಿದು ಉಭಯ ವಸ್ತುಗಳೂ ವಿದ್ಯುತ್ತಟಸ್ಥವಾಗುತ್ತವೆ (ಅಂದರೆ ಸಮವಿದ್ಯುದಾವೇಶಯುತದವಾಗುತ್ತವೆ) ಎಂದು ವಿವರಿಸಿದ. ಅಧಿಕ ವಿದ್ಯುತ್ತನ್ನು ಧನವೆಂದೂ ನ್ಯೂನವಿದ್ಯುತ್ತನ್ನು ಋಣವೆಂದೂ ಹೆಸರಿಸಲು ಆತ ಸೂಚಿಸಿದ. ಹೀಗೆ ವಿದ್ಯುತ್ತು ಮೂಲತಃ ಒಂದೇ, ಇದರ ಒಂದು ಮುಖ ಧನವಿದ್ಯುತ್ತು, ಇನ್ನೊಂದು ಮುಖ ಋಣವಿದ್ಯುತ್ತು ಎಂಬ ಮೂಲಭೂತ ಭಾವನಾತ್ಮಕ ಕೊಡುಗೆ ಫ್ರಾಂಕ್‍ಲಿನ್ನನದು. (ಎರಡು ಬಗೆಯ ವಿದ್ಯುತ್ತುಗಳಿವೆ. ಎಂಬ ಭಾವನೆ ತತ್ಪೂರ್ವದಲ್ಲಿ ಪ್ರಚಲಿತವಾಗಿತ್ತು.) ಸ್ಥಿರವಿದ್ಯುತ್ತೆಂದರೆ ಎಲೆಕ್ಟ್ರಾನುಗಳ ಅಧಿಕ್ಯ ಅಥವಾ ನ್ಯೂನತೆ ಎಂದು ಇಂದು ತಿಳಿದಿದೆ.

	ಫ್ರಾಂಕ್‍ಲಿನ್ ನಿಜಕ್ಕೂ ಯಾವ ವಸ್ತುಗಳಲ್ಲಿ ವಿದ್ಯುತ್ತು ಅಧಿಕವಾಗಿದೆ ಯಾವುದರಲ್ಲಿ ನ್ಯೂನವಾಗಿದೆ ಎಂದು ಭಾವಿಸಿ ತದನುಗುಣವಾಗಿ ತನ್ನ ವಾದ ಮಂಡಿಸಿದ್ದನೋ ಅದು ಮಾತ್ರ ಸರಿ ಅಲ್ಲ. ನಿಜಪರಿಸ್ಥಿತಿ ತಿರುಗುಮರುಗು. ಏಕೆಂದರೆ ಎಲೆಕ್ಟ್ರಾನುಗಳ ಹರಿವೇ ವಿದ್ಯುತ್ತು. ಪ್ರವಾಹ ಋಣಕೊನೆಯಿಂದ ಧನಕೊನೆಗೆ ಸಂಭವಿಸುತ್ತದೆ. ಈ ನಿಷ್ಕøಷ್ಟ ಸಿದ್ಧಾಂತವನ್ನು ತಲುಪುವ ಹಾದಿಯಲ್ಲಿ ಫ್ರಾಂಕ್‍ಲಿನ್ನನ ಕೊಡುಗೆ ಮಹತ್ತರವಾದದು.

	ಎಣ್ಣೆ ಒಲೆ (ಸ್ಟವ್), ದ್ವಿನಾಭಿ (ಬೈಫೋಕಲ್) ಗಾಜುಗಳು, ಚಂಡಮಾರುತಗಳ ಪಥ, ಗಲ್ಫ್ ಸ್ಟ್ರೀಮ್‍ನಲ್ಲಿಯ (ಉತ್ತರ ಅಟ್ಲಾಂಟಿಕ್ ಸಾಗರ) ಉಷ್ಣಜಲಪ್ರವಾಹದ ಪರಿಚಲನೆ ಮುಂತಾದವು ಆತ ಕೈ ಆಡಿಸಿದ ಇತರ ಕ್ಷೇತ್ರಗಳು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ